Loading...
MAEE Award

ಮಾಈ ಪ್ರಶಸ್ತಿ

ಮಾಈ ಪ್ರಶಸ್ತಿ (MAEE Award) ಮೂಲ ಕತೃ ಶಿಕ್ಷಕ ಮಾರುತಿ ಬೊಗಲೆ. ಇವರ ಸ್ಮರಣಾರ್ಥ ಕಲಬುರಗಿ ಮತ್ತು ಬೀದರ ಜಿಲ್ಲೆಯ ಮೂವರು ಸಾಧಕರಿಗೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಮಾಈ ಪ್ರಶಸ್ತಿ ನೀಡಲಾಗುತ್ತದೆ.

ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಗಾಂಧಿನಗರ ಗ್ರಾಮದವರಾದ ಮಾರುತಿ ಬೊಗಲೆ ಅವರು 1998ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿಷ್ಟೆಯಿಂದ ಮತ್ತು ಪ್ರಾಮಾಣಿಕತೆಯಿಂದ ಸೇವೆಯನ್ನು ಸಲ್ಲಿಸಿ ಎಲ್ಲರಿಗೂ ಮಾದರಿಯಾಗಿದ್ದರು. ಬೀದರ ಜಿಲ್ಲೆಯ ಖೇರ್ಡಾ ಕೆ, ರಾಜೇಶ್ವರ, ಕಲ್ಲೂರ, ಸೀತಾಳಗೇರಾ ಮತ್ತು ಕಂದಗೂಳದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ 2019 ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದರು. ಇದಕ್ಕೂ ಮೊದಲು 1992-93 ರಿಂದ ಗೌರವ ಶಿಕ್ಷಕರಾಗಿ ಹುಮನಾಬಾದ ತಾಲೂಕಿನ ಕಂದಗೂಳ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸುತ್ತಾರೆ.

ಕೊನೆಗೆ ತನ್ನ ಶಿಕ್ಷಕ ವೃತ್ತಿಯಿಂದ ನಿವೃತ್ತಿಯನ್ನೂ ಸಹ ಇದೇ ಕಂದಗೂಳ ಶಾಲೆಯಿಂದಾನೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಕಂದಗೂಳ ಶಾಲೆಗೂ ಮತ್ತು ನಮ್ಮ ತಂದೆಯವರಿಗೂ ಒಂದು ಅವಿನಾಭಾವ ಸಂಬಂಧವಿದೆ. ಇವರ ಅದೇಷ್ಟೋ ವಿದ್ಯಾರ್ಥಿಗಳು ದೊಡ್ಡ ಹುದ್ದೆಗಳಲ್ಲಿ ಇದ್ದಾರೆ. ಈಗಲೂ ಅವರನ್ನು ನೆನಪಿಸಿಕೊಳ್ಳುತ್ತಾರೆ.

ತಮ್ಮ ಸರಿಸುಮಾರು 2 ದಶಕಗಳ ಶಿಕ್ಷಕ ವೃತ್ತಿಯಲ್ಲಿ ಒಂದೇ ಒಂದು ಸಣ್ಣ ಕುಂದು ತರಿಸಿಕೊಳ್ಳದೆ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಇಡಿ ಬೀದರ್ ಜಿಲ್ಲೆಯಲ್ಲಿ ಒಬ್ಬ ಮಾದರಿ ಶಿಕ್ಷಕರೆಂದು ಗುರುತಿಸಿಕೊಂಡಿದ್ದಾರೆ. ಇನ್ನು ಎರಡು ವರ್ಷ ಸೇವಾ ಅವಧಿ ಉಳಿದಿರುವಾಗ ಆರೋಗ್ಯ ಹದಗೆಡುತ್ತ ಬಂತು. 2019ರ ಮೇ 31 ರಂದು ನಿವೃತ್ತಿಯ ದಿನದ ವರೆಗೆ ತೀರಾ ಕಷ್ಟಪಟ್ಟು ಶಾಲೆಗೆ ಬಂದು ಹೋಗುತ್ತಿದ್ದರು. ಸೇವಾ ಅವಧಿಯಲ್ಲಿ ಸರಕಾರಕ್ಕೆ ಚ್ಯುತಿ ತರಬಾರದು ಎಂದು ಶ್ರದ್ಧೆಯಿಂದ ಕೆಲಸ ಮಾಡಿ ಕೊನೆಗೆ ನಿವೃತ್ತಿಯ ನಂತರ ಕೇವಲ 6 ತಿಂಗಳಲ್ಲಿ ಅಂದರೆ 16ನೇ ಜನವರಿ 2020 ರಂದು ಕೊನೆಯುಸಿರೆಳೆದರು.

ಅವರಿಗೆ ನಿವೃತ್ತಿಯ ನಂತರ ಶಿಕ್ಷಕರಿಗಾಗಿ, ಶಿಕ್ಷಣ ಕ್ಷೇತ್ರಕ್ಕಾಗಿ ಎನಾದರೂ ಕೊಡುಗೆ ನೀಡಬೇಕು ಎಂದು ತುಂಬಾ ಆಸೆಪಟ್ಟಿದ್ದರು. ಕಾರ್ಯಕ್ರಮದ ರೂಪುರೇಷೆ ಬಗ್ಗೆ ಬಹಳ ಸಲ ಚರ್ಚಿಸಿದ್ದರು. ಅವರ ಆ ಕನಸನ್ನು ಈ ಮಾಈ ಪ್ರಶಸ್ತಿ ಕಾರ್ಯಕ್ರಮದ ಮೂಲಕ ನನಸು ಮಾಡುವ ಪ್ರಯತ್ನ.

2021 ರಿಂದ ದಿ. ಮಾರುತಿ ಬೊಗಲೆ ಅವರ ನೆನಪಿಗೋಸ್ಕರ ಪುಣ್ಯಸ್ಮರಣೆಯ ಅಂಗವಾಗಿ ಎವಿ ಮೀಡಿಯಾ ಸೊಲ್ಯೂಶನ್ಸ್ ಸೊಸೈಟಿಯ ಅಡಿಯಲ್ಲಿ ಪ್ರತಿ ವರ್ಷ ಶಿಕ್ಷಣ, ಪತ್ರಿಕಾರಂಗ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ “ಮಾಈ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತದೆ. ಅದರೊಂದಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಒಳಗೊಂಡಿರುತ್ತದೆ.

Awards